
12th February 2025
ಜಮಖಂಡಿ : ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು, ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.
ನಗರದ ಸಾನಿಯಾ ಮೆಡಿಕಲ್, ನ್ಯಾಮಗೌಡ ಪಾಲಿಕ್ಲಿನಿಕ್, ಬಿಎಲ್ಡಿಇ ನರ್ಸಿಂಗ್ ಕಾಲೇಜ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷದ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು.
400ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆಯನ್ನು ಖ್ಯಾತ ವೈದ್ಯರಾದ ಡಾ.ಶ್ರೀಶೈಲ ಅಂಜುಟಗಿ, ಡಾ.ವಿಶ್ವನಾಥ ಆಲಮೇಲ, ಡಾ.ಪವನ ಬಳ್ಳೂರ, ಡಾ.ಸಂಗಮೇಶ ನ್ಯಾಮಗೌಡ, ಡಾ.ಶಿವಲೀಲಾ ನ್ಯಾಮಗೌಡ ನಡೆಸಿದರು.
ಉಚಿತವಾಗಿ ಔಷಧಿಯನ್ನು ಸಾನಿಯಾ ಮೆಡಿಕಲ್ ವತಿಯಿಂದ ವಿತರಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಮೀರಾಸಾಬ ಒಂಟಮೂರಿ, ಮಲ್ಲು ಗಣಾಚಾರಿ, ಅಕ್ಬರ ಜಮಾದಾರ, ಅಯ್ಯೂಬ ಧನ್ನೂರ ಇತರರು ಇದ್ದರು.